ಆಹಾರಗಳ ಆರ್ದ್ರೀಕರಣ, ಸಾಂದ್ರೀಕರಣ (ಕಾನ್ಸಂಟ್ರೇಷನ್), ತಿಳಿಯಾಗಿಸುವಿಕೆ (ಕ್ಲ್ಯಾರಿಫಿಕೇಷನ್), ಸಾರ ತೆಗೆಯುವಿಕೆ ಎಕ್ಸ್ಟ್ರಾಕ್ಷನ್ ಮುಂತಾದ ಕ್ರಮಗಳಿಗೆ ಬೇಕಾದ ವಿವಿಧ ಯಂತ್ರೋಪಕರಣಗಳನ್ನು ಈ ವಿಭಾಗದವರು ಒದಗಿಸುತ್ತಾರೆ. ತಾವೇ ಮಾದರಿಗಳನ್ನು (ಡಿಸೈನ್) ಹಾಕಿ ಉಪಕರಣಗಳನ್ನು ತಯಾರಿಸುತ್ತಾರೆ. ಪ್ರಯೋಗಶಾಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಕಂಡುಕೊಂಡ ಕೆಲವು ವಿಧಾನಗಳಿಗೆ (ಪ್ರಾಸೆಸ್) ದೊಡ್ಡ ಪ್ರಮಾಣದಲ್ಲಿ ಯಂತ್ರೋಪಕರಣಗಳನ್ನು ಉಪಯೋಗಿಸುವ ಕ್ರಮವನ್ನು ಇವರು ತಿಳಿಸುತ್ತಾರೆ. ಅಲ್ಲದೆ ತಮ್ಮದೇ ಕೆಲವು ಸಂಶೋಧನೆಗಳನ್ನೂ ನಡೆಸುತ್ತಾರೆ. ಯಂತ್ರಗಳಲ್ಲಿ ಸುಧಾರಣೆ, ಹೊಸ ರೀತಿಯ ಉಪಕರಣಗಳು, ಕೆಲವು ಆಹಾರಗಳ ಸಂಸ್ಕರಣೆಯ ರೀತಿ ಮುಂತಾದ ವಿಚಾರಗಳಲ್ಲಿ ಇಲ್ಲಿ ಕೆಲಸ ನಡೆಯುತ್ತದೆ. ಇದಕ್ಕೆ ಸೇರಿದ ಹಾಗೆಯೇ ದೊಡ್ಡ ಆಧುನಿಕ ಕಾರ್ಯಾಗಾರ ಇದೆ. ಇಲ್ಲಿ ಬೇಕಾದ ಉಪಕರಣಗಳನ್ನು ಜೋಡಿಸಲು (ಫ್ಯಾಬ್ರಿಕೇಷನ್) ಬೇಕಾದ ಅನುಕೂಲತೆಗಳೆಲ್ಲವೂ ಇವೆ. 
ಅಮೂಲ್ ಮಕ್ಕಳ ಅಹಾರದ ತಯಾರಿಕೆ, ಕಡಲೇಕಾಯಿ ಪ್ರೋಟೀನ್, ಹುಣಸೇಹಣ್ಣಿನ ಸಾರಪದಾರ್ಥ, ಬೇಕರ್ಸ್ ಯೀಸ್ಟ್ ವಿವಿಧೋಪಯೋಗಿ ಆಹಾರ ಮುಂತಾದ ಹಲವಾರು ಕೈಗಾರಿಕೆಗಳು ದೇಶದಲ್ಲಿ ಈಗ ನಡೆಯುತ್ತಿವೆ. ಇದಕ್ಕೆ ತಂತ್ರಜ್ಞಾನ ಒದಗಿಸಿರುವವರು ಈ ಸಂಸ್ಥೆಯವರೇ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ